ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಕೇಂದ್ರ ಸಚಿವ ಸಂಪುಟದ ನಿರ್ಣಯ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಗೆ ಹಾದಿ ಸುಗಮ ಗೊಳಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ಕೆ. ಸಿವನ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈನಲ್ಲಿಂದು ಭಾರತ ಸರ್ಕಾರದ ವಾರ್ತಾ ಶಾಖೆ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ವಿವರ ನೀಡಿದ ಅವರು, ಈ ಸುಧಾರಣೆಗಳ ಭಾಗವಾಗಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರ (ಐಎನ್-ಎಸ್.ಪಿಎಸಿ ಇ) ಎಂಬ ಸ್ವಾಯತ್ತ ನೋಡಲ್ ಸಂಸ್ಥೆಯನ್ನು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಇದು ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಕೈಗಾರಿಕೆಗಳ ಚಟುವಟಿಕೆಗಳನ್ನು ಅನುಮತಿಸುತ್ತದೆ ಮತ್ತು ನಿಯಂತ್ರಿಸುತ್ತದೆ ಎಂದು ತಿಳಿಸಿದರು.
ಸರ್ಕಾರದ ನಿರ್ಧಾರವು ಖಾಸಗಿ ವಲಯದವರ ಪಾಲ್ಗೊಳ್ಳುವಿಕೆಗೆ ಅನುವು ಮಾಡಿಕೊಡಲಿದ್ದು, ಈ ವೇಳೆ ಇಸ್ರೋ ಹೊಸ ತಂತ್ರಜ್ಞಾನಗಳೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಾಗೂ ಸಾಮರ್ಥ್ಯವರ್ಧನೆಗೆ ಗಮನ ಹರಿಸಲು ಅವಕಾಶ ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ವಾರ್ತಾ ಶಾಖೆಯ ದಕ್ಷಿಣ ವಲಯದ ಮಹಾ ನಿರ್ದೇಶಕರಾದ ಶ್ರೀ ಎಸ್. ವೆಂಕಟೇಶ್ವರ್ ವಿಡಿಯೋ ಸಂವಾದಕ್ಕೆ ಡಾ. ಸಿವನ್ ಹಾಗೂ ಮಾಧ್ಯಮ ಮಿತ್ರರನ್ನು ಸ್ವಾಗತಿಸಿ, ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತು ಈ ವಲಯದ ಸಂಶೋಧನೆಗೆ ಇಂಬು ನೀಡಲು ಕೇಂದ್ರ ಸಚಿವ ಸಂಪುಟದ ಇತ್ತೀಚಿನ ನಿರ್ಣಯದ ಹಿನ್ನೆಲೆಯಲ್ಲಿ ಈ ಸಂವಾದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಒಂದು ಗಂಟೆಗಳ ಕಾಲ ನಡೆದ ವಿಡಿಯೋ ಸಂವಾದದಲ್ಲಿ ಚೆನ್ನೈನ ಪ್ರಮುಖ ಮಾಧ್ಯಮಗಳ ಪ್ರತಿನಿಧಿಗಳು ಮತ್ತು ಹಿಂದೂ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕ ಮತ್ತು ಬಾಹ್ಯಾಕಾಶ ಮತ್ತು ಪರಮಾಣು ವಿಜ್ಞಾನದ ತಜ್ಞ ಶ್ರೀ ಟಿ.ಎಸ್. ಸುಬ್ರಮಣಿಯನ್ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.
ಪ್ರಸಕ್ತ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಡಿಯೋ ಸಂವಾದದ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದ ಭಾರತ ಸರ್ಕಾರದ ವಾರ್ತಾಶಾಖೆಗೆ ಇಸ್ರೋ ಅಧ್ಯಕ್ಷ ಡಾ. ಸಿವನ್ ಧನ್ಯವಾದ ಅರ್ಪಿಸಿದರು.
Add Comment